Blog

ಶಿವಪ್ಪ ಚೌವ್ಹಾಣ ಗೆ ಪಿ.ಎಚ್.ಡಿ ಪ್ರದಾನ

ಶಿವಪ್ಪ ಚೌವ್ಹಾಣ ಗೆ ಪಿ.ಎಚ್.ಡಿ ಪ್ರದಾನ

e-ಸುದ್ದಿ ಲಿಂಗಸುಗೂರು

ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡೂರು ತಾಂಡಾದ ಯುವ ಪ್ರತಿಭೆ ಶಿವಪ್ಪ ಚೌವ್ಹಾಣ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 75 ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. (ಡಾಕ್ಟರೇಟ್) ಪದವಿ ಪ್ರದಾನ ಮಾಡಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಷ್ಠಿತ ಬೃಹತ್ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್‌ ಚಂದ್ ಗೆಹ್ಹ್ಲೋಟ್ ಅವರು ಶಿವಪ್ಪ ಚೌವ್ಹಾಣ್ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

“ಅರುಂಧತಿ ರಾಯ್ ಅವರ ಕಾಲ್ಪನಿಕೇತರ ಕೃತಿಗಳಲ್ಲಿ ಬಂಡವಾಳಶಾಹಿಯ ವಿಮರ್ಶೆ” (*A Critique of Capitalism in Arundhati Roy’s Non-Fictional Works*) ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯಲ್ಲಿ ಅರುಂಧತಿ ರಾಯ್ ಅವರ ಕಾಲ್ಪನಿಕೇತರ ಬರಹಗಳಲ್ಲಿ ವ್ಯಕ್ತವಾಗುವ ಬಂಡವಾಳಶಾಹಿ ವಿರೋಧಿ ಚಿಂತನೆಗಳು, ಜಾಗತೀಕರಣ, ಸ್ಥಳಾಂತರ, ಪರಿಸರ ನ್ಯಾಯ ಹಾಗೂ ಪ್ರತಿರೋಧ ರಾಜಕಾರಣವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಲಾಗಿದೆ.
ಈ ಸಂಶೋಧನೆಯನ್ನು ಮುಕುಂದ ಲಮಾಣಿ ಅವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ.

ಗೌಡೂರು ತಾಂಡಾದ ಠಾಕ್ರಪ್ಪ ಹಾಗೂ ತಿಪ್ಪಮ್ಮ ದಂಪತಿಗಳ ಪುತ್ರರ ಶಿವಪ್ಪ ಅವರು, ಗ್ರಾಮೀಣ ಭಾಗದ ಕಡು ಬಡತನ ಹಾಗೂ ಅನೇಕ ಸವಾಲುಗಳ ನಡುವೆಯೂ ಉನ್ನತ ಶಿಕ್ಷಣದತ್ತ ಚಿತ್ತ ಹರಿಸಿ ಈ ಸಾಧನೆ ಮಾಡಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಗೌಡೂರು ತಾಂಡಾ ಹಾಗೂ ಪ್ರೌಢ ಶಿಕ್ಷಣವನ್ನು ಗೌಡೂರು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಡಾಕ್ಟರೇಟ್ ಪದವಿ ಪಡೆದ ಮೊದಲ ಯುವ ಪ್ರತಿಭೆಯ ಉನ್ನತ
ಶೈಕ್ಷಣಿಕ ಸಾಧನೆಯು ಗೌಡೂರು ಹಾಗೂ ತಾಂಡಾದ ಯುವಕರಿಗೆ ಮಾದರಿಯಾಗಿದೆ. ತಮ್ಮೂರಿನ ಪ್ರತಿಭೆ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗೌಡೂರು ತಾಂಡಾದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.ಇವರ ಸಾಧನೆಯನ್ನು ಶಿಕ್ಷಕರು, ಕುಟುಂಬ ವರ್ಗ,ಗ್ರಾಮಸ್ಥರು,ಸ್ನೇಹಿತರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಮನೆಯಲ್ಲಿ ಬಡತನವಿದ್ದರೂ ನನ್ನ ತಂದೆ, ತಾಯಿ, ಸಹೋದರರು ನನಗೆ ಉನ್ನತ ಶಿಕ್ಷಣ ಕೊಡಿಸಲು ಬಹಳ ಶ್ರಮ ಪಟ್ಟಿದ್ದಾರೆ.ಈ ಪದವಿ ಅವರಿಗೆ ಅರ್ಪಿಸುತ್ತೆನೆ. ಪ್ರಾಥಮಿಕ ಶಿಕ್ಷಣದಿಂದ ಇಲ್ಲಿಯವರೆಗೂ ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳಿಗೂ ಅನಂತ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ ಶಿವಪ್ಪ ಚೌವ್ಹಾಣ್.

ವರದಿ -ವೀರೇಶ.ಎಸ್.ಅಂಗಡಿ ಗೌಡೂರು

Don`t copy text!