Blog
ದಾಸೋಹದ ಸಂಗಣ್ಣ
ಶ್ರಾವಣ ಶರಣ ಚಿಂತನೆ
ದಾಸೋಹದ ಸಂಗಣ್ಣ
12ನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹಕ್ಕೆ ದುಡಿಯುವ ಶರಣರು ಶ್ರಮಪಟ್ಟು ದುಡಿದು ನಡೆದು ನುಡಿದು ತೋರಿದ ಶರಣರು . ಒಳ್ಳೆಯ ಸದಾಚಾರದಿಂದ ದುಡಿದು ಬಂದ ಲಾಭದಲ್ಲಿ ದಾಸೋಹ ಮಾಡುತ್ತಿದ್ದ ರು .
ಶರಣರು ತಮ್ಮ ಮನದ ಅಹಂಕಾರ ತೊರೆದು ಸಮರ್ಪಣಾ ಭಾವದಿಂದ ಅರ್ಪಿಸಿದ ಧನ, ದಾಸೋಹಕ್ಕೆ ವಿನಿಯೋಗವಾಗುತ್ತಿತ್ತು. ದಾಸೋಹವೆಂದರೆ, ಅನ್ನದಾಸೋಹ ಮಾತ್ರವಲ್ಲ, ಭಕ್ತಿ ದಾಸೋಹ ಯುಕ್ತಿ ದಾಸೋಹ , ಮಮಕಾರ ದಾಸೋಹ.
ಅವಗುಣಗಳಿಂದ ತುಂಬಿದ ಮನದಿಂದ ಮಾಡುವ ದಾಸೋಹ,ದಾಸೋಹ ವಾಗುವುದಿಲ್ಲ .ಭಕ್ತರಲ್ಲಿ ಸದ್ಭಾವ ಸದಾಚಾರವಿರಬೇಕು. ಸದಾಚಾರದಿಂದ ಸಮರ್ಪಣಾ ಭಾವದಿಂದ ದಾಸೋಹ ಮಾಡಬೇಕು. ಉಳ್ಳವರು ಇಲ್ಲದವರಿಗೆ ದಾನ ಮಾಡುವುದು ಸುಲಭ. ಆದರೆ ದಾಸೋಹ ಮಾಡುವುದು ಅಷ್ಟು ಸುಲಭವಲ್ಲ. ನಾನು ಗಳಿಸಿದ್ದು ನನ್ನ ಸಂಪತ್ತು ಎಂಬ ಅಹಂಕಾರ ನಿರಸನಗೊಳ್ಳಬೇಕಾದರೆ, ದಾಸೋಹ ಕಡ್ಡಾಯವೆನ್ನುತ್ತಾರೆ ಶರಣರು. ಅರುವಿನಿಂದ -ಆಚಾರ, ಆಚಾರದಿಂದ – ಗುರು, ಗುರುವಿನಿಂದ ಲಿಂಗ ,ಲಿಂಗದಿಂದ ಜಂಗಮ, ಜಂಗಮದಿಂದ- ಪ್ರಸಾದ ಪ್ರಸಾದದಿಂದ- ಪರದೈವ ಇದೆಲ್ಲವೂ ದಾಸೋಹದಿಂದ ಮಾತ್ರ ಸಾಧ್ಯ .
ದಾಸೋಹವೆಂದರೆ, ಕೇವಲ ಉನ್ನುವುದಲ್ಲ. ಉಣಿಸುವುದಲ್ಲ ಸತ್ಯ ಶುದ್ಧ ಕಾಯಕ ಜೀವಿಗಳಾಗಿ ಬದುಕು ನಡೆಸುವದಾಗಿತ್ತು. ಈ ದಾಸೋಹ ನಿತ್ಯ ನಿರಂತರವಾಗಿತ್ತು. ದಾಸೋಹ ಎನ್ನುವುದು ತನು ,ಮನ, ಧನದ ಸಮರ್ಪಣೆ .ಏಳುನೂರೆಪ್ಪತ್ತು ಅಮರಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದ ಜ್ಞಾನದಾಸೋಹದ ಮುಖ್ಯ ಉದ್ದೇಶ .ಅಜ್ಞಾನ ಅಳಿದು ಸುಜ್ಞಾನ ಮೂಡಿಸುವುದಾಗಿತ್ತು.
ಶರಣರು ಅರಿವೇ ಗುರು, ಆಚಾರವೇ ಲಿಂಗ ಮತ್ತು ಅನುಭಾವವೇ ಜಂಗಮ. ಇಲ್ಲಿ ಮೂರ್ತರೂಪದ ಗುರು ಒಂದು ಕಡೆ ಇದ್ದರೆ ಅಮೂರ್ತ ರೂಪದ ಅರಿವು ಮತ್ತೊಂದು ಕಡೆ ಇದೆ. ಮೂರ್ತರೂಪವಾದ ಇಷ್ಟ ಲಿಂಗ ಕಾಣಿಸಿದರೆ, ಅಮೂರ್ತ ರೂಪದ ಆಚಾರ ಲಿಂಗ ಕಾಣದು. ಅದೇ ರೀತಿಯಾಗಿ ಕಾವಿತೊಟ್ಟ ಜಂಗಮ ನಮಗೆ ಕಾಣ ಸಿಕ್ಕರೆ ಒಳಗಿರುವ ಅನುಭವದ ಜಂಗಮ ನಮಗೆ ಕಾಣಿಸದು .ನಾವು ಗುರುಲಿಂಗ ಜಂಗಮಕ್ಕೆ ತನು ,ಮನ, ಧನವನ್ನು ಭಕ್ತಿಯಿಂದ ಸಮರ್ಪಿಸಬೇಕು.
ಅರಿವೇ ಗುರುವಾಗುವುದು , ಆಚಾರವೇ ಲಿಂಗ ವಾಗುವುದು, ಅನುಭಾವವೇ ಜಂಗಮ ವಾಗುವುದು.ನಿಜವಾದ ದಾಸೋಹವಾಗುತ್ತದೆ .
ದಾಸೋಹ ಎಂಬುದು ನಿರಂತರವಾದ ಸತ್ಯದಿಂದ ಕೂಡಿದುದಾಗಿರಬೇಕು ಇಲ್ಲಿ ಕೊಡುವುದು ,ಪಡೆಯುವುದು ಮುಖ್ಯವಾಗುವುದಿಲ್ಲ. ತಿಳಿಯುವುದು ,ಅರಿಯುವುದು, ಹೊಳೆಯುವುದು ಮುಖ್ಯ.
ದುರಾಚಾರದಿಂದ ದುಷ್ಟತನದಿಂದ ದುರ್ಬದ್ಧಿಯಿಂದ ಕೆಟ್ಟ ವಿಚಾರದಿಂದ ಮಾಡುವ ದಾಸೋಹ ದಾಸೋಹವೇ ಅಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ.
ಶರಣರಾದವರಲ್ಲಿ ತನು ಶುದ್ಧ, ಮನಶುದ್ಧ ಮತ್ತು ಭಾವ ಶುದ್ಧವಾದ ದಾಸೋಹ ಇರಬೇಕು. ಅಂತಹ ಶುದ್ಧ ಮನದ ಶರಣ ದಾಸೋಹಿಯಾದ ಸಂಗಣ್ಣನ ಬಗ್ಗೆ ನಾನಿಂದು ಪ್ರಸ್ತುತಪಡಿಸುತ್ತಿದ್ದೇನೆ.
ಕಾಲ ಸು. 1160. ಶಿವಶರಣ. ವಚನಕಾರ. ಸಂಗಣ್ಣ ಎಂತಲೂ ಇವನನ್ನು ಕರೆವುದಿದೆ. ಇವನ ಕಾಯಕ ಮಠಕ್ಕೆ ಬಂದಂಥವರಿಗೆ ಅನ್ನಸಂತರ್ಪಣ ಮಾಡುವುದಾಗಿತ್ತು. ಜೊತೆಗೆ ಮಠಗಳಲ್ಲಿ ಮಕ್ಕಳಿಗೆ ಈತ ಪಾಠ ಹೇಳಿಕೊಡುತ್ತಿದ್ದ. ಊರು ಬನವಾಸಿ. ಈತ ಅಲ್ಲಿನ ಮಧುಕೇಶ್ವರನ ಪರಮಭಕ್ತ. ಈತ ಎಷ್ಟು ವಚನಗಳನ್ನು ಬರೆದಿದ್ದಾನೆಂಬುದು ತಿಳಿದಿಲ್ಲ. ಇಲ್ಲಿಯವರೆಗೆ 102 ಮಾತ್ರ ದೊರೆತಿವೆ. ಶಂಭುವಿನಿಂದತ್ತ ಸ್ವಯಂಭುಗಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರ ಎಂಬುದು ಇವರ ವಚನಗಳ ಅಂಕಿತ.
ಸತ್ತ್ವಭರಿತವಾದ ಇವರ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭುಗಳ ಪ್ರಭಾವ ಚೆನ್ನಾಗಿ ಕಾಣುತ್ತದೆ.
ಇವರ ಬಹುತೇಕ ವಚನಗಳು ದಾಸೋಹದ ಮೌಲ್ಯವನ್ನು ಹೇಳುತ್ತವೆ .
ಅಷ್ಟೇ ಅಲ್ಲದೇ ಷಟ್ಸ್ಥಲ,
ಅಷ್ಟಾವರಣ-ಮುಂತಾದುವುಗಳ ವಿವರಣೆಗಳನ್ನು ಇವುಗಳಲ್ಲಿ ಕಾಣಬಹುದು.
ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ?
ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ
ಹಾಲಾಹಲ ಒಡಲನೇರಿದುದುಂಟೆ?
ಸಂಜೀವನದ ಫಲವ ಕಂಡ ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ?
ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ
ಅವಗುಣ ವೇಷದಲ್ಲಿ ಅಡಗಿತ್ತು, ಸದ್ಗುಣ ವಸ್ತುವಿನಲ್ಲಿ ದ್ದಿತ್ತು.
ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು,
ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ?
ಸಾಮಾನ್ಯವಾಗಿ ಬೇವಿನ ಗಿಡ ಹಾಗೂ ಅದರ ಎಲೆಗಳೆಲ್ಲವೂ ಕಹಿಯಾದವು .
ಬೆಲ್ಲವ ತಿನ್ನುತ್ತ ಕಹಿಯಾದ ಬೇವಿನ ಮರವನ್ನು ಏರಿದರೆ ಬೇವಿನ ಮರವು ಸಿಹಿಯಾಗುವುದೇ ? .
ಖಂಡಿತ ಸಿಹಿಯಾಗಲಾರದು ತಾನೆ?.
ಬೇವಿನ ಮರ ಏರಿ ಬೆಲ್ಲ ತಿಂದರೆ ಬೆಲ್ಲ ಏನಾದರೂ ಕಹಿಯಾಗುವುದೇ ?
ಅದೇ ಬೇವಿನ ಗಿಡಕ್ಕೆ ಕಟ್ಟೆಯನ್ನು ಕಟ್ಟಿ ಅದಕ್ಕೆ ಬೆಲ್ಲದ ನೀರನ್ನು ಹಾಕಿದರೂ ಆ ಬೇವಿನ ಗಿಡವು ತನ್ನ ಕಹಿ ಗುಣ ವನ್ನು ಬಿಟ್ಟು ಸಿಹಿಯಾಗಲು ಹೇಗೆ ಸಾಧ್ಯ? ಎನ್ನುವ ಅರಿವು ನಮಗೆ ಇರಬೇಕಾಗುತ್ತದೆ .
ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ ಹಾಲಾಹಲ ಒಡಲ ನೇರಿದುದುಂಟೆ?
ಎಲ್ಲರಿಗೂ ಗೊತ್ತು ಹಾವು ಒಂದು ವಿಷಪೂರತವಾದುದು ಎಂದು .
ವಿಶಪೂರಿತವಾದ ಹಾವಿನ ಹೆಡೆಯ ಮೇಲೆ ಕಾಲಿಟ್ಟು ಹಾಲು ಕುಡಿದರೆ
ಹಾವಿನಲ್ಲಿರುವ ವಿಷವೆಲ್ಲ ಹೋಗಿ ಅದು ಹಾಲಾಗುವುದೇ ?
ಅಥವಾ ಹೀಗೂ ಹೇಳಬಹುದು .
ವಿಷಪೂರಿತವಾದ ಹಾವನ್ನು ತುಳಿದು ಹಾಲು ಕುಡಿದರೆ ಹಾವಿನ ವಿಷ ನಮ್ಮ ಮೈಯಲ್ಲಿ ಏರುವುದೇ?
ಸಂಜೀವನದ ಫಲವ ಕಂಡು ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ
ಸಂಜೀವಿನಿ ಎನ್ನುವ ಸಸ್ಯವು ಹಸಿವು, ನಿದ್ದೆ, ನೀರಡಿಕೆಯನ್ನು ಹೋಗಲಾಡಿಸುವ ಒಂದು ರೀತಿಯ ಸಸ್ಯ.
ಇಂಥಹ ಸಸ್ಯವನ್ನು ನೋಡಿ ಬಾಯಿ ಚಪ್ಪಡಿಸಿದರೆ ಹೋಗುವ ಪ್ರಾಣ ಉಳಿದು ನೆಲೆ ನಿಲ್ಲುವುದೇ? ನಮ್ಮ ಆತ್ಮವು ಮತ್ತೆ ಹುಟ್ಟಿ ಬರುವುದೇ ? ಆತ್ಮಕ್ಕೆ ಸ್ಥಳ ಅದರ ನೆಲೆ ಏನಾದರೂ ಇದೆಯೇ ಎಂಬುವ ಪ್ರಶ್ನೆಗಳು ನಮ್ಮನ್ನು ಕಾಡಿದಾಗ ತಿಳಿದು ಬಂದ ಉತ್ತರ ವನ್ನು ನಾವು ಕಾಣಬಹುದು .
ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ
ಅವಗುಣ ವೇಷದಲ್ಲಿ ಅಡಗಿತ್ತು ಸದ್ಗುಣ ವಸ್ತುವಿನಲ್ಲಿ ಹೊದ್ದಿತ್ತು.
ಒಳ್ಳೆಯ ಗುಣವನ್ನು ಹೊಂದಿದ ವ್ಯಕ್ತಿಯು ಯಾವಾಗಲೂ ಒಳ್ಳೆಯ ವಿಚಾರವನ್ನೇ ಹೊಂದಿರುತ್ತಾನೆ.
ಆತನಲ್ಲಿ ಅವಗುಣಗಳೆಲ್ಲ ಹೋಗಿ ಸದ್ಗುಣ ಸಂಪನ್ನವಾದ ಗುಣಗಳನ್ನು ಹೊಂದಿದ ವ್ಯಕ್ತಿಯ ವಿಚಾರಗಳು ಸದ್ಗುಣ ಸಂಪನ್ನವುಗಳೇ ಆಗಿರುತ್ತಾವೆ .
ಸದ್ಗುಣ ಸಂಪನ್ನವಾದ ವ್ಯಕ್ತಿಯನ್ನು ಅವಗುಣವನ್ನು ಹೊಂದಿದ ವ್ಯಕ್ತಿಯ ಜೊತೆಗೆ ಸರಿಗಟ್ಟಬಾರದು .
ಅವಗುಣವನ್ನು ಹೊಂದಿದ ವ್ಯಕ್ತಿಯನ್ನು ಸದ್ಗುಣವಂತನಾಗಿ ಮಾರ್ಪಡಿಸುವ ಚೈತನ್ಯವಾದ ಶಕ್ತಿ ನಮ್ಮಲ್ಲಿಯೇ ಅಡಗಿರುತ್ತದೆ. ಅಂತಹ ಸದ್ಗುಣ ಚೈತನ್ಯ ಶಕ್ತಿಯು ಶರಣರಲ್ಲಿ ನಾವು ಕಾಣುತ್ತೇವೆ .
ಶರಣರ ಕೊಡುಗೆ ಅವರ ದಾಸೋಹದಲ್ಲಿ ನಾವು ಕಾಣುತ್ತೇವೆ
ಸತ್ಪುರುಷರಿಗೆ ದುರ್ಜನರು ಆಶ್ರಯ ಕೊಡುವುದಿಲ್ಲ. ದುರ್ಬಲರಿಗೆ ಸಹಾಯ ಮಾಡುವುದಿಲ್ಲ. ಜ್ಞಾನ ಗಂಧವಾಗಲೀ ,ಸ್ನೇಹರಸವಾಗಲೀ ಅವರಲ್ಲಿಲ್ಲ.
ಎನ್ನುವ ಮಾರ್ಮಿಕವಾದ ಮಾತನ್ನು ನಾವು ದಾಸೋಹ ಸಂಗಣ್ಣನಲ್ಲಿ ಕಾಣುತ್ತೇವೆ .
ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು,
ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
ದಾಸೋಹ ಸಂಗಣ್ಣ ತನ್ನ ಅಂಕಿತನಾಮದ ಮಾತುಳಂಗ ಮಧುಕೇಶ್ವರನ ಇರುವು .
ನನ್ನ ಗುರುವಿನ ಇರುವಿಕೆಯನ್ನು ವಿಚಾರಿಸಿದರೆ, ನಾನು ಇಟ್ಟ ಭಕ್ತಿ ಹಾರಿಹೋಗಿತ್ತು ಸತ್ಯವು ಜಾರಿ ಹೋಯಿತು . ಮತ್ತು ವಿರಕ್ತಿಯು ತೂರಿ ಹೋಯಿತು .
ಮಾತುಳಂಗ ಮಧುಕೇಶ್ವರ.
ನನ್ನ ಗುರುವಿನ ನೆಲೆಯನ್ನು ನಾನು ಅರಿತಿಲ್ಲ ನನ್ನ ಗುರುವಿನ ಸತ್ಯವನ್ನು ನಾನು ತಿಳಿದಿಲ್ಲ .
ಎನ್ನುವ ಅರ್ಥ ಪೂರ್ಣವಾದ ಮಾತುಗಳನ್ನು ನಾವಿಲ್ಲಿ ಕಾಣಬಹುದು .
_________________
ಕಾಯದ ಗುಣವನರಿಯದೆ ಕರ್ಮಯೋಗವ ಮಾಡಬಹುದೆ?
ಕರ್ಮದ ಗುಣವನರಿಯದೆ ಆತ್ಮಯೋಗವ ಮಾಡಬಹುದೆ?
ಆತ್ಮನ ಗುಣವನರಿಯದೆ ವರ್ಮಯೋಗವ ಕಾಣಬಹುದೆ?
ನೀರಿನಿಂದಲಾದ ಕೆಸರ ನೀರಿಂದಲೆ ತೊಳೆವಂತೆ,
ಮುಳ್ಳು ಮುಳ್ಳಿನಿಂದವೆ ಕಳೆವಂತೆ,
ಕರ್ಮದಿಂದ ಸತ್ಕರ್ಮ ವರ್ಮದಿಂದ
ನಿಜವರ್ಮ ಸೂಜಿಯ ಮೊನೆಯ ದಾರದಂತೆ
ಇದು ಲಿಂಗ ಒಡಗೂಡಿದ ಕ್ರಿಯಾಪಥಯೋಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
ಈ ಭೂಮಿಯ ಮೇಲೆ ಹುಟ್ಟಿ ಬಂದಿದ್ದೆ ಒಂದು ಪುಣ್ಯ. ಈ ಶರೀರ ಅಂದರೆ,
ಈ ಕಾಯದ ಮಹತ್ವವನ್ನು ಮರೆತು ಕರ್ಮ ಎನ್ನುವುದಕ್ಕೆ ಬಲಿಯಾಗದೆ ಈ ದೇಹವನ್ನೇ ದೇವಾಲಯ ಮಾಡಿಕೊಂಡು ,ನಡೆ ಮತ್ತು ನುಡಿಗಳನ್ನು ವಂದಾಗಿಸಿಕೊಂಡು ಅರಿವಿನ ಮಾರ್ಗವನ್ನು ತುಳಿದರೆ ಯಾವ ಕರ್ಮ ಯೋಗವೆಂದು ನಂಬಿ ಕುಡುವುದು ಉಚಿತವಲ್ಲ .
ಹಾಗೇ ನಾವು ಮಾಡಿದ ಕರ್ಮದ ಫಲ ನಮಗೆ ಎಂದು ತಿಳಿದು ಆತ್ಮಯೋಗದಲ್ಲಿಯೇ ಮೈಮರೆತುಕೊಂಡು ಕೂಡಲು ಆಗುವುದೇ ?
ಆತ್ಮದ ಗುಣವನ್ನು ಅರಿತುಕೊಂಡು ನಮ್ಮ ನಮ್ಮ ಕರ್ಮದ ಯೋಗದಲ್ಲೇ ಬದುಕು ನೂಕುವುದು ಉಚಿತವೇ ?
ನಿಂತ ನೀರಿನಿಂದಲೇ ಹೊಲಸಾಗುವುದು.ಕೊಳಕಾಗುವುದು.
ಅದೇ ಹೊಲಸು ನೀರಿನಲ್ಲೇ ಸುಂದರ ಕಮಲ ಹೂ ಅರಳಿ ನಗುವಂತೆ ,
ಅದೇ ಕೆಸರಿನಲ್ಲಿ ಹುಟ್ಟಿದ ಕಮಲಕ್ಕೆ ಅದೇ ನೀರಿನಿಂದಲೇ ಹತ್ತಿದ ಕೆಸರನ್ನು ತೊಳೆಯುವುದು.
ಮುಳ್ಳಿನಿಂದ ಮುಳ್ಳನ್ನು ತೆಗೆಯುವಂತೆ,
ನಾವು ಮಾಡಿದ ಕರ್ಮದಿಂದ ಕರ್ಮದ ಫಲವನ್ನು ಅನುಭವಿಸಿದಂತೆ, ಸತ್ಕರ್ಮದಿಂದ ನಮಗೆ ಸತ್ಕರ್ಮದ ಫಲ ಪ್ರಾಪ್ತಿವಾಗುತ್ತದೆ.
ಹರಿದ ಬಟ್ಟೆಯನ್ನು ಹೊಲೆದು ಸುಂದರ ಗೊಳಿಸುವ ಸೂಜಿ ಮೊನೆಗೆ ದಾರ ಪೋಣಿಸಿದ ಹಾಗೆ,
ಅಂಗವನ್ನೇ ಲಿಂಗಮಯವಾಗಿಸಿಕೊಳ್ಳುವ ಭಕ್ತಿ ದಾಸೋಹದ ಕ್ರಿಯಾಪಥವನ್ನು ತುಳಿಯುವುದನ್ನು ಅತ್ಯಂತ ಮಾರ್ಮಿಕವಾಗಿ ದಾಸೋಹ ಸಂಗಣ್ಣನ ಈ ಒಂದು ವಚನದಲ್ಲಿ ನಾನು ಕಂಡುಕೊಂಡ ದಾಸೋಹವಾಗಿದೆ .
__________
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯ ಆಗಿ.
ಕೊಂಬೆಗೆ ಕೋಡಗವಾಗಿ, ಅವರವರ ಬೆಂಬಳಿಯಲ್ಲಿ ಅಜಬೀಜವ ಕಾವ ಜಂಬು ಕನಂತೆ ತಿರುಗಲೇತ್ತಕೆ,?
ಆಯುಷ್ಯ ತೀರಿದಲ್ಲಿ ಮರಣ,
ಐಶ್ವರ್ಯ ಹೋದಲ್ಲಿ ದಾರಿದ್ರ ಬಪ್ಪುದು ಎಲ್ಲಿದ್ದಳು ತಪ್ಪದೆಂದರಿದ ಮತ್ತೆ,
ಬಾಯಿಯ ಮುಚ್ಚಿ ಸತ್ತಂ ತಿಪ್ಪ ತೆರೆ ಇದು ಭಕ್ತಿ ವಿರುಕ್ತಿಯ ತರ ಶಂಭುವಿನಿಂದಿತ್ತ, ಸ್ವಯಂ ಭುವಿನಿಂದ ಅತಿಬಳ ನೋಡಾ, ಮಾತುಳೊಂಗ ಮಧುಕೇಶ್ವರನು.
ಸಾಮಾನ್ಯವಾಗಿ ನಾವು ನೀವುಗಳೆಲ್ಲ ಹಾವಿನ ಹುತ್ತವನ್ನು ನೋಡಿದ್ದೇವೆ .ಅದರಲ್ಲಿ ವಿವಿಧ ಬಗೆಯ ಹಾವುಗಳು ಇರುವುದು ಗೊತ್ತು .ಹಾಗೇ ನೀರಿನಲ್ಲಿಯೂ ಕೂಡಾ ವಿವಿಧ ಬಗೆಯ ಹಾವುಗಳು ಇರುತ್ತವೆ .
ಹಾಗೇ ಮರವನ್ನು ಆಶ್ರಯಿಸಿ ಕೊಂಬೆಯನ್ನು ಹಿಡಿದುಕೊಂಡು ಜೋತುಬೀಳುವ ಕೋತಿ ಇರುವಂತೆ,ಮಂಗನಂತೆ ಮನಸ್ಸನ್ನು ಹೊಂದಿ ಅವರ ಇಷ್ಟ ದಂತೆ ಅವರಿಗೇ ಜೋತುಬಿದ್ದ ಮಂಗನಂತೆ ಏಕೆ ಹೊಂದಿಕೊಂಡು ಅವರನ್ನೇ ಹಿಂಬಾಲಿಸುವ ನಿಮ್ಮ ಬುದ್ಧಿ ಏನಾಗಿದೆ ಇಷ್ಟಾನಿಷ್ಟಗಳಿಗೆ ತಕ್ಕಂತೆ ಅಜ ಬೀಜ ಅಂದರೆ ಗಂಡು ಕುರಿಯನ್ನು ಕಾಯುವ ನರಿ ಜಂಬೂಕನಂತೆ ಸುಮ್ಮ ಸುಮ್ಮನೇ ಏಕೆ ಸುತ್ತುವಿರಿ. ನಮ್ಮ ಆಯುಷ್ಯ ಮುಗಿದ ಮೇಲೆ ಭಗವಂತನಲ್ಲಿ ಲೀನವಾಗುವ ಈ ಆತ್ಮವು ಕೊನೆಯಾಗಲೇ ಬೇಕು ಆ ಮರಣವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.ಮನುಷ್ಯನಿಗೆ ಯಾವುದೂ ಶಾಶ್ವತ ಅಲ್ಲ ಇವತ್ತು ಬಡವನಾಗಿದ್ದವ ನಾಳೆ ಶ್ರೀಮಂತ ನಾಗಬಹುದು .ಶ್ರೀಮಂತ ನ ಐಶ್ವರ್ಯ ಹೋದ ಕೂಡಲೇ ಬಡತನ ಬರುವುದು ಸಹಜ ತಾನೇ ? ಹೀಗಿರುವಾಗ ಅನ್ಯಾಯ ಅಸತ್ಯ ಅಧರ್ಮ ದಿಂದ ನಡೆಯುವವರು ಎಲ್ಲಿಯಾದರೂ ಕಂಡು ಬಂದರೆ ಅದರ ವಿರುದ್ಧ ವಾಗಿ ಧ್ವನಿ ಎತ್ತದೇ ಸುಮ್ಮನಾಗಿ ಕೆಲವರು ಬಾಯಿ ಮುಚ್ಚಿಕೊಂಡು ಸತ್ತಂತೆ ಇರುತ್ತಾರೆ. ಇಂಥವರು ಮಾಡುವ ಭಕ್ತಿಯನ್ನು ನೋಡಿ ನಗುವನು ಭಗವಂತ. ಇಂಥಹ
ಭಕ್ತಿಯು ಆ ಭಗವಂತನಿಗೆ ದೇವರಿಗೆ ಸಲ್ಲುವುದಿಲ್ಲ.ಎನ್ನುವ ಅರ್ಥವನ್ನು ದಾಸೋಹ ಸಂಗಣ್ಣನವರ ಈ ಒಂದು ವಚನದಲ್ಲಿ ನಾವು ಕಂಡುಕೊಳ್ಳಬಹುದು.